Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೀವನ ಕರೆದುಕೊಂಡು ಹೋದಲ್ಲಿಗೆ ಹೋಗುವುದೇ ಹೊಂದಿಸಿ ಬರೆಯಿರಿ.. 3.5/5 ****
Posted date: 13 Mon, Feb 2023 08:50:58 AM
ಮುಂದಿನ ಜೀವನದ ಬಗ್ಗೆ  ಹಲವಾರು ಕನಸುಗಳನ್ನು ಕಟ್ಟಿಕೊಂಡು ಬರುವ  ಎಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್  ಸೇರುವ  ವಿದ್ಯಾರ್ಥಿಗಳ ತರಲೆ, ತುಂಟಾಟ, ಮುನಿಸು, ಸ್ನೇಹ, ಹಾಗೂ ಪ್ರೀತಿಯ ಪಯಣ ನಂತರ ಎದುರಾಗುವ ಭಾವನೆಗಳ ಬೇಸುಗೆ, ಬದುಕಿನ ಏರಿಳಿತಗಳ ಹಾದಿಯನ್ನು ನಿರ್ದೆಶಕ ರಾಮೇನಳ್ಳಿ ಜಗನ್ನಾಥ್ ಅವರು "ಹೊಂದಿಸಿ ಬರೆಯಿರಿ" ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.

ಬೇರೆ ಬೇರೆ ಊರುಗಳಿಂದ ಬಂದು ಹಾಸ್ಟೆಲ್ ಸೇರುವ  ಜಗನ್‌ (ಪ್ರವೀಣ್ ತೇಜ್), ಟೈಗರ್ ಸೋಮ (ಅನಿರುದ್ಧ್ ಆಚಾರ್ಯ) ಕುಮಾರ್ (ಶ್ರೀ), ರಂಜಿತ್ (ನವೀನ್ ಶಂಕರ್) ಇವರ ನಡುವೆ ಬೆಡಗಿ  ಸನಿಹ (ಐಶಾನಿ ಶೆಟ್ಟಿ) ಹಾಗೂ ಅವಳ ಗೆಳತಿಯರು. ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯುವ  ತುಂಟಾಟ, ಗಲಾಟೆ, ಲೀಡರ್ಶಿಪ್ ಜೊತೆಗೆ ಸೀನಿಯರ್ ಹಾಗೂ ಜೂನಿಯರ್ ನಡುವೆ ನಡೆಯೋ ಹೊಡೆದಾಟ, ಬದುಕಿನ ಪಾಠ, ಕನಸು ನನಸು ಮಾಡಿಕೊಳ್ಳುವ ತವಕ, ನೋವು ನಲಿವಿನ  ಒಳಗೆ ಏನೆಲ್ಲಾ ಅಡಗಿರುತ್ತದೆ ಎಂಬುದನ್ನು ಭಾವನಾತ್ಮಕವಾಗಿ ತೆರೆದಿಡುವುದರ ಜೊತೆಗೆ ಬದುಕು ಬಂದಂತೆ ಸಾಗಬೇಕು, ಜೀವನದಲ್ಲಿ ನಾವೇನೋ  ಬಯಸಿದರೆ,  ಮತ್ತಿನ್ನೇನೋ ಆಗುತ್ತದೆ ಎಂಬ ಸೂಕ್ಷ್ಮವನ್ನು ಚಿತ್ರದ  ಹಲವು ಪಾತ್ರಗಳ ಮೂಲಕ ತೆರೆದಿಡುವ ಪ್ರಯತ್ನ ಈ ಚಿತ್ರದಲ್ಲಿದೆ.  ಕ್ಲೈಮಾಕ್ಸ್ ಹಲವು ದೃಷ್ಟಿಕೋನಗಳಿಗೆ ಒಂದು ಉತ್ತರವನ್ನು ನೀಡಲಿದೆ. 

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್,  ಬಹು ವಿಸ್ತಾರವಾಗಿ ಕಾಲೇಜು ವಿದ್ಯಾರ್ಥಿಗಳ ತುಂಟಾಟ, ತರಲೆ, ತಮಾಷೆ, ತ್ಯಾಗ, ಹೆತ್ತವರ ಸಂಕಟ ಇದನ್ನೆಲ್ಲ ಭಾವನಾತ್ಮಕವಾಗಿ ನೋಡುಗರ ಮನಮುಟ್ಟುವಂತೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ.

ಚಿತ್ರದ ಪ್ರಥಮಾರ್ಧದಲ್ಲಿ   ವಿದ್ಯಾರ್ಥಿಗಳ ಸ್ನೇಹ, ತರಲೆ, ತುಂಟಾಟದೊಂದಿಗೆ ಸಾಗಿದರೆ. ದ್ವಿತೀಯಾರ್ಧದಲ್ಕಿ  ಭಾವನಾತ್ಮಕ ವಿಚಾರದೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುವ ಕಥೆಯಿದೆ.

ಚಿತ್ರದ ಹೈಲೈಟ್ ಎಂದರೆ ಸಂಭಾಷಣೆಗಳು, ಜೊತೆಗೆ  ಕ್ಯಾಮೆರಾ ವರ್ಕ್ ಕೂಡ ಸೊಗಸಾಗಿ ಮೂಡಿಬಂದಿದೆ.  ಹಾಡುಗಳು ಸಹ ಗಮನ ಸೆಳೆಯುವಂತಿದೆ. ಇಂಥ  ಉತ್ತಮ ಪ್ರಯತ್ನಕ್ಕೆ  ಗೆಳೆಯರೆಲ್ಲ ಕೈಜೋಡಿಸಿದ್ದಾರೆ.   ತಮಗೆ ಸಿಕ್ಕ ಪಾತ್ರಗಳಿಗೆ ಜೀವತುಂಬಿ  ಅಚ್ಚುಕಟ್ಟಾಗಿ ನಿಭಾಯಿಸಿರುವುದು ನವೀನ್ ಶಂಕರ್‌, ಶ್ರೀಮಹದೇವ್ , ಪ್ರವೀಣ್ ತೇಜ್. ಇನ್ನು ತನ್ನ ಮಾತುಗಳ‌ ಮೂಲಕವೇ ಯುವ ಪ್ರತಿಭೆ ಅನಿರುದ್ಧ ಆಚಾರ್ಯ ಗಮನ ಸೆಳೆಯುತ್ತಾರೆ. ಅದೇ ರೀತಿ ಐಶಾನಿ ಶೆಟ್ಟಿಗೂ ಮಹತ್ವದ ಪಾತ್ರವೇ ಸಿಕ್ಕಿದೆ. ಅರ್ಚನಾ ಕೊಟ್ಟಿಗೆ, ಭಾವನಾ ರಾವ್ ಹಾಗೂ ಸಂಯುಕ್ತ ಹೊರನಾಡು ತಮ್ಮ ತಮ್ಮ ಪಾತ್ರಕ್ಕೆ  ನ್ಯಾಯ ಒದಗಿಸಿದ್ದು, ವಿಶೇಷಪಾತ್ರ ಮಾಡಿರುವ ಅರ್ಚನಾ ಜೋಯಿಸ್ ಚಿತ್ರದ ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳುತ್ತಾರೆ. ಪ್ರಿನ್ಸಿಪಾಲ್ ಪಾತ್ರದಲ್ಲಿ ಹನುಮಂತೇಗೌಡ ಇಷ್ಟವಾಗುತ್ತಾರೆ.  ಸುಧಾ ನರಸಿಂಹರಾಜು, ಧರ್ಮೇಂದ್ರ ಅರಸ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ  ಸಾತ್ ನೀಡಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿಸುವ ಹೊಂದಿಸಿ ಬರೆಯಿರಿ ಚಿತ್ರವನ್ನು ಒಮ್ಮೆ ಕಣ್ತುಂಬಿಕೊಳ್ಳಲು ಅಡ್ಡಿಯೇನಿಲ್ಲ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀವನ ಕರೆದುಕೊಂಡು ಹೋದಲ್ಲಿಗೆ ಹೋಗುವುದೇ ಹೊಂದಿಸಿ ಬರೆಯಿರಿ.. 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.